1.ನಿಮ್ಮ ಹಿನ್ನೆಲೆಯ ಬಗ್ಗೆ ನಮಗೆ ಏನಾದರೂ ತಿಳಿಸಿ.
ನಾನು ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಕೃಷಿ ಪ್ರಧಾನ ಮಧ್ಯಮ ಕುಟುಂಬಕ್ಕೆ ಸೇರಿದವಳು.ತಂದೆ ನಾರಾಯಣ ರೈ.ತಾಯಿ ಶಶಿಕಲಾ.ನಾನು ಇಂಜನಿಯರಿಂಗ್ ಪದವೀಧರೆ. ಹಾಗೆಯೇ ಜೀವನೋಪಾಯಕ್ಕಾಗಿ ಖಾಸಾಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತಿರುವೆ.
- ನಿಮ್ಮ ಬರವಣಿಗೆಯ ಪ್ರಯಾಣವನ್ನು ಯಾವಾಗ ಮತ್ತು ಹೇಗೆ ಆರಂಭಿಸಿದ್ದೀರಿ?
ನಾನು ಪ್ರೌಢಶಾಲೆಯಲ್ಲಿ ಕಲಿಯುತಿರುವಾಗ ನನಗೆ ಈ ಬರವಣಿಗೆಯ ಹುಚ್ಚು ಶುರುವಾಯಿತು.ನಾನು ಕನ್ನಡ ಮಾಧ್ಯಮ ವಿದ್ಯಾರ್ಥಿನಿ.ಮಾತೃಭಾಷೆಯಲ್ಲಿ ಕಲಿಯುವಾಗ ವಿಷಯಗಳನ್ನು ಕಂಠಪಾಠ ಮಾಡುವ ಬದಲಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತೇವೆ.ಇದೇ ನನ್ನನ್ನು ಬರವಣಿಗೆಯತ್ತ ಸೆಳೆಯಿತೇನೋ ಎಂದೆನಿಸುತ್ತದೆ.
- ನಿಮ್ಮ ಪುಸ್ತಕ ಯಾವುದರ ಬಗ್ಗೆ?
ಈ ಪುಸ್ತಕ ಅಳಿಯುತಿರುವ ಪ್ರಕೃತಿಯ ಮನದ ಮಾತು.ಹಾಗೆಯೇ ಇದರಲ್ಲಿ ಬಹಳಷ್ಟು ಹೊಸ ವಿಷಯಗಳಿವೆ.
- ಈ ಪುಸ್ತಕವನ್ನು ಬರೆಯಲು ನಿಮ್ಮನ್ನು ಯಾವುದು ಪ್ರೇರೇಪಿಸಿತು?
ಪ್ರಕೃತಿ ನನಗೆ ಬಹಳ ಪ್ರಿಯವಾದ ವಿಷಯ.ಆಧುನಿಕತೆಯಿಂದ ಅವನತಿಯತ್ತ ಸಾಗುತಿರುವ ಪ್ರಕೃತಿ ಹಾಗೂ ಸುತ್ತಮುತ್ತ ನಡೆಯುವ ಅದೆಷ್ಟೋ ಘಟನೆಗಳು ಈ ಕಾದಂಬರಿಗೆ ಪ್ರೇರಣೆಯಾಯಿತು.
- ನಿಮ್ಮ ಬರವಣಿಗೆಯ ಪೂರ್ವ ಅನುಭವ ಹೇಗಿತ್ತು? ಏನು ನಿಮ್ಮನ್ನು ಒತ್ತಾಯಿಸಿತು?
ನಾನು ಬರಿ ಕವನ ಹಾಗೂ ಲೇಖನಗಳನ್ನು ಬರೆಯುತಿದ್ದೆ.ನನಗೆ ಕಾದಂಬರಿ ಬರೆಯಬಲ್ಲೆ ಎಂಬ ಸಣ್ಣ ಊಹೆ ಕೂಡ ಇರಲಿಲ್ಲ.ಪುಟ್ಟಣ್ಣ ಕಣಗಾಲ್ ಚಲನ ಚಿತ್ರ ಸಂಸ್ಥೆಯಲ್ಲಿ ಚಲನ ಚಿತ್ರ ನಿರ್ದೇಶನ ಕೋರ್ಸ್ನ ಸಮಯದಲ್ಲಿ ನನ್ನ ಗುರುಗಳು ಹಾಗೂ ಚಲನಚಿತ್ರ ನಿರ್ದೇಶಕರಾದ ಸೇನ್ ಪ್ರಕಾಶ್ ರವರು ನನಗೆ ಸಿನಿಮಾ ಕಥೆಗಳನ್ನು ಬರೆಯಲು ಮಾರ್ಗದರ್ಶನ ನೀಡಿದರು. ಮುಂದಿನ ದಿನಗಳಲ್ಲಿ ಅದು ನನ್ನನು ಕಾದಂಬರಿ ಬರೆಯಲು ಪ್ರೇರೇಪಿಸಿತು .ಹಾಗೆಯೇ ನನ್ನ ಮನೆಯ ಪ್ರತಿ ಸದಸ್ಯರು,ನನ್ನ ಗುರುವೃಂದ ಸ್ನೇಹಿತರು ಹಾಗೂ ಸಾಮಾಜಿಕ ಜಾಲತಾಣದ ಸಾಹಿತ್ಯ ಪ್ರೇಮಿಗಳ ಪಾಲು ಕೂಡ ಇದರಲ್ಲಿ ಬಹಳಷ್ಟು ಇದೆ..
- ನಿಮ್ಮ ಬರವಣಿಗೆಯ ಅನುಭವ ಹೇಗಿತ್ತು? ನಯವಾಗಿತ್ತೆ ಅಥವಾ ಕಷ್ಟಕರವಾಗಿತ್ತೇ?
ನನ್ನ ಮನಸಿನಲ್ಲಿ ಯಾವುದೇ ಒಂದು ಕೆಲಸ ಮಾಡುವ ಯೋಚನೆ ಬಂದಾಗ ನಾನದನ್ನು ಯೋಜನೆಯನ್ನಾಗಿ ಮಾಡುತ್ತೇನೆ.ಕಷ್ಟ ನಷ್ಟದ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ.ನಾನು ಮಾಡುವ ಪ್ರತಿಯೊಂದು ಕೆಲಸವು ನನಗೆ ಮನರಂಜನೆಯನ್ನು ಕೊಡುತ್ತದೆ.ಹಾಗೆಯೇ ನಾನು ಮಾಡಲಿಚ್ಛಿಸದ ಕೆಲಸವನ್ನು ಯಾರು ಬಂದು ಒತ್ತಾಯಿಸಿದರೂ ನಾನು ಮಾಡುವುದಿಲ್ಲ.
- ನಿಮ್ಮ ಪ್ರಕಾಶಕರು ಎಷ್ಟು ಕೊಡುಗೆ ನೀಡಿದ್ದಾರೆ? ಅವರು ನಿಮಗಾಗಿ ಪ್ರಕ್ರಿಯೆಯನ್ನು ಸುಲಭಗೊಳಿಸಿದ್ದಾರೆಯೇ?
ಹೌದು.ಇಲ್ಲಿ ಪ್ರಕಾಶಕರ ಪಾತ್ರ ಬಹಳ ಮುಖ್ಯವಾದದು.ನನ್ನ ಮೊದಲ ಕಾದಂಬರಿಯಾಗಿರುವ ಕಾರಣ ನನಗೆ ಪುಸ್ತಕ ನಿರ್ಮಾಣದ ಅನುಭವವಿರಲಿಲ್ಲ.ಪ್ರಕಾಶಕರ ಸಹಕಾರದಿಂದ ನನ್ನ ಕಾದಂಬರಿ ಪುಸ್ತಕವಾಯಿತು. ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
- ನೀವು ಈ ಪುಸ್ತಕವನ್ನು ಬರೆಯುವುದಕ್ಕೆ ನಿಮ್ಮ ಕುಟುಂಬ ಮತ್ತು ಸ್ನೇಹಿತರ ಪ್ರತಿಕ್ರಿಯೆ ಏನು?
ಮೊದಲಿಗೆ ನನ್ನ ಸುತ್ತಲಿನವರು “ಈಗ ಪುಸ್ತಕ ಟ್ರೆಂಡಿಂಗ್ನಲ್ಲಿ ಇಲ್ಲ.ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆಂಗ್ಲ ಮಾಧ್ಯಮದಲ್ಲಿ ಅಧ್ಯಯನ ಮಾಡುತಿರುವವರು.ಕನ್ನಡ ಪುಸ್ತಕ ಯಾರು ಓದುತ್ತಾರೆ”ಎಂದರು. ಇದು ನಿಜ ಕೂಡ.ಆದರೆ ನನಗೆ ಕ್ಷಣಕಾಲಕ್ಕೆ ಬದಲಾಗುತಿರುವ ಟ್ರೆಂಡ್ ಮೇಲೆ ನಂಬಿಕೆಯಿಲ್ಲ.ನಾನು ಯುಗಾಯುಗಾಂತರದಿಂದ ಬೆಳೆದು ಬಂದಿರುವ ಕೆಲವೊಂದು ಸಂಸ್ಕೃತಿ ಹಾಗೂ ಸಂಪ್ರದಾಯದ ಮೇಲೆ ನಂಬಿಕೆ ಇಡುತ್ತೇನೆ.ನನ್ನ ಪ್ರಕಾರ ಪುಸ್ತಕಗಳು ಟ್ರೆಂಡ್ ಅಲ್ಲ.ಅದು ನಮ್ಮ ಸಂಸ್ಕೃತಿ.
- ಈ ಪ್ರಯಾಣದಲ್ಲಿ ನಿಮ್ಮನ್ನು ಬೆಂಬಲಿಸಿದ ಜನರನ್ನು ಉಲ್ಲೇಖಿಸಿ.
ಬಹಳಷ್ಟು ಜನರಿದ್ದಾರೆ.ಅವರಿಗೆಲ್ಲ ಪುಸ್ತಕದಲ್ಲಿ ವಿಶೇಷ ಕೃತಜ್ಞತೆಯನ್ನು ಸಲ್ಲಿಸಿದ್ದೇನೆ.
- ನಿಮ್ಮ ಪುಸ್ತಕ ಓದುಗರ ಮೇಲೆ ಹೇಗೆ ಪ್ರಭಾವ ಬೀರಲಿದೆ?
ಇದೊಂದು ಪ್ರಯೋಗಿಕ ಕಾದಂಬರಿ.ನಾನು ಓದುಗರ ವಿಮರ್ಶೆಗಾಗಿ ಕಾಯುತಿದ್ದೇನೆ.
- ನಕಾರಾತ್ಮಕ ಕಾಮೆಂಟ್‌ಗಳು ಯಾವುದಾದರೂ ಇದ್ದರೆ ನೀವು ಹೇಗೆ ವ್ಯವಹರಿಸುತ್ತೀರಿ?
ನಾನು ಹೊಗಳಿಕೆ ತೆಗಳಿಕೆ ಇವೆರಡರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ.ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಎಂಬುದನ್ನು ನಂಬಿದವಳು.ಆ ನಕಾರಾತ್ಮಕ ಕಮೆಂಟ್ ನಿಜವಾಗಿಯೂ ನನ್ನ ಬೆಳವಣಿಗೆಯನ್ನು ಕುಂಟಿತ ಮಾಡುವುದಾದರೆ ಬದಲಾಗಿ ಮುಂದೆ ಸಾಗುವುದರಲ್ಲಿ ಯಾವ ಬೇಸರವೂ ಇಲ್ಲ. ಹಾಗೆಯೇ ಯಾವುದೇ ನಕಾರಾತ್ಮಕ ಕಾಮೆಂಟ್ಗಳಿಗೆ ನನ್ನ ಆತ್ಮವಿಶ್ವಾಸವನ್ನು ಕುಗ್ಗಿಸುವ ಶಕ್ತಿ ಕೂಡ ಇಲ್ಲ.ಸೋಲೋ ಗೆಲುವೊ ಮುಂದೆ ಬದುಕಿದೆ ಅಷ್ಟೇ.
- ನಿಮ್ಮ ಸಾಹಿತ್ಯಿಕ ಮಾರ್ಗದರ್ಶಕರು ಮತ್ತು ರೋಲ್ ಮಾಡೆಲ್‌ಗಳು ಯಾರು?
ನನಗೆ ರೋಲ್ ಮಾಡೆಲ್ ಗಳು ಅಂತ ಯಾರು ಇಲ್ಲ. ಯಾಕೆಂದರೆ ನಾನು ನನ್ನ ಸ್ವಂತ ಬರಹದ ಶೈಲಿಯನ್ನೈ ದಿನೇ ದಿನೇ ಉತ್ತಮಗೊಳಿಸುವ ಪ್ರಯತ್ನದಲ್ಲಿದ್ದೇನೆ.ಹಾಗೆಯೇ ಕಲಿಕೆ ನಿರಂತರ.ನಮ್ಮ ಕರ್ನಾಟಕದಲ್ಲಿ ಖಂಡಿತವಾಗಿಯೂ ಇಲ್ಲಿಯವರೆಗೆ ಸಾಹಿತಿಗಳಿಗೆ ಬರಗಾಲ ಬಂದಿಲ್ಲ. ಮುಂದೆಯೂ ಬರಬಾರದೆಂಬುದು ನನ್ನ ಆಶಯ.ನಾನು ಕನ್ನಡದ ಪ್ರತಿಯೊಬ್ಬ ಬರಹಗಾರನಿಂದ ಕೂಡ ಕಲಿಯಲು ಇಷ್ಟಪಡುತ್ತೇನೆ.ಹಾಗೆಯೇ ಅವರನ್ನು ಹೃದಯ ಪೂರ್ವಕವಾಗಿ ಗೌರವಿಸುತ್ತೇನೆ.
- ನಿಮ್ಮ ಮುಂಬರುವ ಬರವಣಿಗೆಯ ಉದ್ಯಮಗಳು ಯಾವುವು?
ಕೆಲವೊಂದು ಯೋಚನೆಗಳಿವೆ.ಅವುಗಳು ಯೋಜನೆಗಳಾದಾಗ ಬಹಿರಂಗಪಡಿಸುವೆ.
- ನಮ್ಮ ಮಹತ್ವಾಕಾಂಕ್ಷಿ ಬರಹಗಾರರಿಗೆ ಏನಾದರೂ ಸಲಹೆ ಇದೆಯೇ?
ಇಂದಿನ ಜನಾಂಗದ ಯುವಕರು ವಿದ್ಯಾವಂತರೂ ಹಾಗೂ ಬುದ್ದಿವಂತರು. ಪ್ರತಿಯೊಬ್ಬರಲ್ಲೂ ತಮ್ಮದೆ ಆದ ಸ್ವಂತ ಯೋಜನೆಗಳಿರುತ್ತದೆ. ನಾವು ಸಲಹೆಕೊಟ್ಟು ಆ ಯೋಜನೆಗಳನ್ನು ಕೆಡಿಸುವ ಬದಲು ಅವರ ಯೋಜನೆಗಳು ಅವರಿಷ್ಟದ ಹಾಗೆ ಕಾರ್ಯರೂಪಕ್ಕೆ ಬರಲು ಸಹಾಯ ಮಾಡುವುದು ಉತ್ತಮವೆಂದು ನನ್ನ ಅಭಿಪ್ರಾಯ.ಆಗ ನಾವು ಸಾಹಿತ್ಯದಲ್ಲೂ ವೈವಿಧ್ಯತೆಯನ್ನು ಕಾಣಬಹುದು.